ಫಾರೆಸ್ಟರ್, ಸೆಸಿಲ್ ಸ್ಕಾಟ್
1899- ಇಂಗ್ಲಿಷ್ ಕಾದಂಬರಿಕಾರ ಹುಟ್ಟಿದ್ದು ಕೈರೋನಲ್ಲಿ. ವೈದ್ಯಶಾಸ್ತ್ರವನ್ನಭ್ಯಾಸ ಮಾಡಿದನಾದರೂ ಆ ವೃತ್ತಿಯನ್ನು ಅವಲಂಬಿಸಲಿಲ್ಲ. ಮೊದಲ ಪತ್ತೇದಾರಿ ಕಾದಂಬರಿ ಪೇಮಂಟ್ ಡೆಫರ್ಡ್ (1926) ಜನಪ್ರಿಯವಾಯಿತಲ್ಲದೆ ಅದನ್ನು ನಾಟಕವನ್ನಾಗಿ ರಂಗಭೂಮಿಗೆ ತರಲಾಯಿತು. ದೋಣಿಯಲ್ಲಿ ಇಂಗ್ಲೆಂಡ್, ಫಾನ್ಸ್, ಜರ್ಮನಿಗಳಲ್ಲಿ ಪ್ರಯಾಣ ಮಾಡಿ ಎ ವಾಯೇಜ್ ಆಫ್ ದಿ ಆ್ಯನಿ ಮಾರ್ಬಲ್ (1929), ದಿ ಆ್ಯನಿ ಮಾರ್ಬಲ್ ಇನ್ ಜರ್ಮನಿ (1930) ಮುಂತಾದ ಪ್ರವಾಸ ಕಥನಗಳನ್ನು ಬರೆದ. ಜನಪ್ರಿಯನಾದ ಕ್ಯಾಪ್ಟನ್ ಹಾರನ್‍ಬ್ಲೋಯರ್ ಎಂಬ ಪತ್ತೇದಾರನ ಪಾತ್ರವನ್ನು ಸೃಷ್ಟಿಸಿ ದಿ ಹ್ಯಾಪಿ ರಿಟರ್ನ್ (1937), ಫ್ಲೈಯಿಂಗ್ ಕಲರ್ಸ್ (1938), ಎ ಷಿಪ್ ಆಫ್ ದಿ ಲೈನ್ (1939) ಮುಂತಾದ ಕಾದಂಬರಿಗಳನ್ನು ಬರೆದ. ಕೊನೆಯದಕ್ಕೆ ಟೇಪ್ ಬ್ಲ್ಯಾಕ್ ಮೆಮೋರಿಯಲ್ ಪ್ರಶಸ್ತಿ ದೊರೆಕಿತು. ದಿ ಕಮೋಡೋರ್ (1944), ಲಾರ್ಡ್ ಹಾರೆನ್ ಬ್ಲೋಯರ್ (1946), ಮಿಸ್ಟರ್ ಮಿಡ್‍ಷಿಪ್‍ಮನ್ ಹಾರನ್ ಬ್ಲೋಯರ್ (1950), ಹಾರೆನ್ ಬ್ಲೋಯರ್ ಅಂಡ್ ದಿ ಅಟ್ರೋಪೋಸ್ (1953) ಮುಂತಾದ ಕಾದಂಬರಿಗಳನ್ನೂ ಬರೆದ.

	ಬ್ರೌನ್ ಆನ್ ರೆಸೊಲೂಷನ್ (1929), ದಿ ಗನ್ (1933), ಮತ್ತು ದಿ ಷಿಪ್ (1943)ಇವು ಇವನ ಇತರ ಕಾದಂಬರಿಗಳು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ